ಕೊಳಾಯಿ ಕೆಲಸ

ಒಂದು ಕಟ್ಟಡದ ಕುಡಿಯುವ ನೀರಿನ ಸರಬರಾಜು ಮತ್ತು ಉಪಯೋಗಾನಂತರದ ನೀರಿನ ಹೊರಸಾಗಾಣಿಕೆ-ಇವುಗಳ ಏರ್ಪಾಡು (ಪ್ಲಂಬಿಂಗ್). ಆರೋಗ್ಯ ಹಾಗೂ ರಕ್ಷಣೆಯ ದೃಷ್ಟಿಯಿಂದ ಈ ಎರಡೂ ಕಾರ್ಯಗಳು ಸಮರ್ಪಕವಾಗಿರಬೇಕಾದರೆ: 1.ಬೇಕಾದ ಒಂದೊಂದು ಎಡೆಗೂ ಸಾಕಷ್ಟು ನೀರು ಹರಿಯುವಂತಿರಬೇಕು; 2.ಯಾವ ಕಾರಣದಿಂದಲೂ (ಕಡೆಯಿಂದಲೂ) ಬಳಸಿದ ನೀರು ಮತ್ತೆ ಸರಬರಾಜು ಕೊಳವೆಗೆ ಸೇರದಂತಿರಬೇಕು; 3.ಗೃಹಸಾರ ಹಾಗೂ ಜಲಮಿಶ್ರಿತ ತ್ಯಾಜ್ಯಗಳು ತತ್‍ಕ್ಷಣ ಹೊರಹೋಗುವಂತಿರಬೇಕು; ಎಲ್ಲೂ ಕಟ್ಟಿಕೊಂಡು ತಡೆಯಾಗಬಾರದು; 4.ಈ ರೊಚ್ಚು ಸಾಗುವ ಕೊಳಾಯಿಯಿಂದ ಇಲಿಗಳಾಗಲೀ, ಕ್ರಿಮಿಕೀಟಗಳಾಗಲಿ, ದುರ್ವಾಸನೆಯ ಅನಿಲಗಳಾಗಲೀ ಮನೆಯೊಳಕ್ಕೆ ಬಾರದಂತಿರಬೇಕು. 

	ಜನರ ನಿತ್ಯಜೀವನದಲ್ಲಿ ಕೊಳಾಯಿ ಕೆಲಸದ ಸಂಬಂಧ ಅತಿ ನಿಕಟ. ಆದ್ದರಿಂದ ಈ ಕೆಲಸದ ಮೇಲೆ ಸರಕಾರದ (ಪುರಸಭೆಯ) ಹತೋಟಿ ಇದೆ. ನೀರು ಸರಬರಾಜಿನ ಮತ್ತು ಗ್ರಾಮಸಾರ ಸಾಗಾಣಿಕೆಯ ಪ್ರಧಾನ ಕೊಳಾಯಿಗಳು ಸಾರ್ವಜನಿಕ ರಸ್ತೆಯ ಬದಿಗಳಲ್ಲಿ, ಭೂಗತವಾಗಿ ಹಾಕಲ್ಪಟ್ಟಿದ್ದು ಅವುಗಳಿಂದ ಪ್ರತಿಮನೆಗೂ ಸಂಪರ್ಕವೇರ್ಪಡಿಸಲು ಸರ್ಕಾರ ಅಥವಾ ಪುರಸಭೆ ಒಂದು ಶುಲ್ಕವನ್ನು ವಿಧಿಸುತ್ತದೆ. ಮನೆಯಲ್ಲಿನ ಕೊಳಾಯಿ ಕೆಲಸ ಸಮರ್ಪಕವಾಗಿದೆಯೆಂದು ಖಾತ್ರಿಮಾಡಿಕೊಂಡು ಬಳಿಕ ಸಾರ್ವಜನಿಕ ವ್ಯವಸ್ಥೆಗೆ ಸಂಪರ್ಕವನ್ನು ಒದಗಿಸಲಾಗುವುದು. ಪುರಸಭೆ ಒದಗಿಸುವ ಪ್ರಧಾನ ನೀರು ಸರಬರಾಜು ಕೊಳಾಯಿಯಲ್ಲಿ ನೀರಿನ ಒತ್ತಡ ಸಾಮಾನ್ಯವಾಗಿ ಮನೆಯ ಎಲ್ಲ ಕಡೆಗಳಿಗೂ ನೀರು ಮುಟ್ಟಲು ಸಾಕಾಗುವಷ್ಟು ಇರುತ್ತದೆ. ತುಂಬ ಎತ್ತರದಲ್ಲಿರುವ ಅಥವಾ ಅಂತಸ್ತುಗಳುಳ್ಳ ಕಟ್ಟಡಕ್ಕೆ ಅಥವಾ ಬಹಳ ಉದ್ದದ ಕೊಳಾಯಿ ಪಂಕ್ತಿಯಲ್ಲಿ ಅಥವಾ ಇತರ ಯಾವುದೇ ವಿಶಿಷ್ಟ ಉದ್ದೇಶಗಳಿಗಾಗಿ ಹೆಚ್ಚು ಪರಿಮಾಣದಲ್ಲಿ ನೀರನ್ನು ಉಪಯೋಗಿಸುವಾಗ ನೀರಿನ ಒತ್ತಡ ಸಾಲದಾದಾಗ ಪಂಪನ್ನು ಉಪಯೋಗಿಸುವುದರಿಂದ ಸ್ಥಳೀಯವಾಗಿ ಬೇಕಾದ ಒತ್ತಡವನ್ನು ಉಂಟುಮಾಡಿಕೊಳ್ಳಬಹುದು. ಪುರಸಭೆಯಿಂದ ನೀರಿನ ಸರಬರಾಜು ಇಲ್ಲದಿರುವ ಕಡೆ ತೋಡು ಅಥವಾ ಕೊಳವೆ ಬಾವಿಯಿಂದ ಪಂಪಿನ ಮೂಲಕ ನೀರನ್ನು ತೆಗೆದುಕೊಳ್ಳುವುದುಂಟು. ಮನೆಯಲ್ಲಿನ ನೀರು ಸಾಗಣೆ ಕೊಳವೆಗಳ ವ್ಯಾಸ ಸಾಮಾನ್ಯವಾಗಿ 20 ಮಿಮೀಗೆ ಕಡಿಮೆಯಾಗಿರದೆ ಸಾಕಷ್ಟು ಉದ್ದವಾಗಿರುತ್ತದೆ. ಮೂತ್ರಿಗಳಿಗೆ, ಕಕ್ಕಸುಗಳಿಗೆ ಕೊಚ್ಚುನೀರನ್ನು ಅವುಗಳ ಏಣಿಗಿಂತ ಕೆಳಮಟ್ಟದಲ್ಲಿ ಬಿಡುವ ಸಂದರ್ಭಗಳಲ್ಲಿ ಕೊಳಾಯಿಯಿಂದ ನೀರನ್ನು ಸೀದಾ ಅಲ್ಲಿ ಬಿಡುವಂತಿರದೆ ಅವನ್ನು ಪ್ರತ್ಯೇಕಿಸಿರುವ ವ್ಯವಸ್ಥೆಯಿರಬೇಕು.

	ಹಾಗೆಯೇ ಕೊಳಾಯಿಗಳಿರುವ ವಾಷ್ ಬೇಸಿನ್‍ಗಳಿಂದ, ರೆಫ್ರಜಿರೇಟರುಗಳಿಂದ ಬಿಡಲ್ಪಟ್ಟ ನೀರನ್ನು ವಿಸಜ್ರ್ಯಸಾಗಣೆ ಕೊಳಾಯಿಗೆ ಸೀದಾ ಸೇರಿಸಿರದೆ, ಕೊಂಚ ಅಂತರವುಳ್ಳ ಲಾಳಿಕೆಯಿಂದ ಅಡಚು ತಡೆಯ ಮೂಲಕವೇ ಸೇರಿಸಬೇಕು.

	ಕೊಳಕು ನೀರನ್ನು, ಕಕ್ಕಸಿನ ಮಲಮೂತ್ರಾದಿಗಳನ್ನು ಒಂದು ಸಾಗಣೆ ಕೊಳಾಯಿಗೆ ಹರಿಯುವಂತೆ ಮಾಡಿ ಇದನ್ನು ರಸ್ತೆಯಂಚಿನ ಭೂಗತ ಗ್ರಾಮಸಾರ ಕೊಳಾಯಿಗೆ ಸೇರಿಸಲಾಗುತ್ತದೆ. ಈ ಗೃಹಸಾಗಣೆ ಕೊಳಾಯಿಗೆ ಮನೆ ಚರಂಡಿಗಳ ಒಂದೊಂದು ಸಂಪರ್ಕವನ್ನು ಕೊಡುವಾಗಲೂ ಕೊಳಾಯಿಯ ದುರ್ವಾಸನೆ, ಕ್ರಿಮಿಕೀಟಾದಿಗಳು ಇತ್ತ ಬರದಂತೆ ಒಂದು ತಡೆ ಸಾಧನ ಅತ್ಯಗತ್ಯ.  ಸಂಪರ್ಕ ಕೊಳಾಯಿಯಲ್ಲಿ S ಅಥವಾ P ಆಕಾರದಲ್ಲಿ ಒಂದು ಕೆಳತಿರುವನ್ನು ಉಪಯೋಗಿಸುವುದರಿಂದ ಇದು ಸಾಧ್ಯವಾಗುತ್ತದೆ. ಸಂಪರ್ಕ ಕೊಳಾಯಿಯಿಂದ ನೀರು ಆಚೆಗೆ ಹರಿದಾಗಲೆಲ್ಲ ಅದರ ಈ ಕೆಳತಿರುವಿನಲ್ಲಿ ಕೊಂಚ ಭಾಗ ನೀರು ಉಳಿದು ಸಾಗಣೆ ಕೊಳಾಯಿಗೆ ಸೀದಾ ಸಂಪರ್ಕವನ್ನು ತಡೆಯುತ್ತದೆ. ಯಾವ ಕಾರಣದಿಂದಲೂ (ಉದಾ: ನೀರು ರಭಸದಿಂದ ಹರಿಯುವುದರಿಂದ ಅಥವಾ ಸಾಗಣೆ ಕೊಳಾಯಿಯೊಳಗೆ ನಿರ್ವಾತ ಅಥವಾ ಅಲ್ಪವಾತ ಸ್ಥಿತಿಯಲ್ಲಿ ಕಡಿಮೆ ಒತ್ತಡವುಂಟಾಗಿ ಇಳಿಗೊಳವೆ-ಸೈಫನ್-ಕ್ರಿಯೆಯಿಂದ) ಈ ನೀರು ಕೊಚ್ಚಿಹೋಗಿ ಅಡಚು ತಡೆ ಒಡೆಯದಂತೆ ಅದರ ರಚನೆಯಲ್ಲಿ ಎಚ್ಚರಿಕೆ ವಹಿಸಬೇಕು. ಈ ಉದ್ದೇಶವನ್ನಿಟ್ಟುಕೊಂಡೇ ಸಾಗಣೆ ಕೊಳಾಯಿಯೊಳಗಿನ ಒತ್ತಡ ಹೊರಗಿನ ವಾತಾವರಣದ ಒತ್ತಡಕ್ಕೆ ಸಮವಾಗಿರುವಂತೆ ಮಾಡಿರುತ್ತಾರೆ. ಮನೆಯ ತಾರಸಿಯ ಮೇಲು ಮಟ್ಟದಲ್ಲಿ ಬಿಡುಗಂಡಿಯುಳ್ಳ ಕೊಳಾಯಿ ಸ್ತಂಭಗಳನ್ನು ನಿಲ್ಲಿಸುವುದು (ಹಲವು ಅಂತಸ್ತಿನ ಮನೆಗಳಲ್ಲಿ) ಇದರ ಒಂದು ಕ್ರಮ. ವಿಸಜ್ರ್ಯಗಳೊಡನೆ ಬೆರೆತ ನೀರು ಸುಲಭವಾಗಿ ಕೊಚ್ಚಿಕೊಂಡು ಹೋಗುವಂತೆ ಕೊಳಾಯಿ ಪಂಕ್ತಿಗಳಲ್ಲಿ ಸೂಕ್ತವಾದ ಇಳಿಜಾರಿರಬೇಕು. ತಾರಸಿಯಿಂದ ಬೀಳುವ ಅಥವಾ ನೆಲದ ಮೇಲೆ ಹರಿಯುವ ಮಳೆಯ ನೀರು ಗೃಹಸಾರ ವಿಸರ್ಜನ ವ್ಯವಸ್ಥೆಗೆ ಸೇರಿಕೊಳ್ಳುವಂತಿರದೆ ಅದಕ್ಕೆ ಪ್ರತ್ಯೇಕವಾದ ಚರಂಡಿ ವ್ಯವಸ್ಥೆಯಿರಬೇಕು. ಈ ವಿಭಾಗದ ಕೊಳಾಯಿ ಕೆಲಸದಲ್ಲಿ ಗಾಜುಮೈಯುಳ್ಳ ಪಿಂಗಾಣಿ ವಸ್ತುಗಳ ಬಳಕೆಯೇ ಹೆಚ್ಚು. ಸುಲಭವಾಗಿ ಶುಭ್ರವಾಗುವಿಕೆ, ನೀರನ್ನು ಹೀರಿಕೊಳ್ಳದಿರುವುದು, ದುರಸ್ತಿಗೆ ಅಳವಡುವಿಕೆ ಇದರ ಮುಖ್ಯ ಲಕ್ಷಣಗಳು. ಅಲ್ಲದೆ ತಾಂಡವಾಳದ ಕೊಳಾಯಿಗಳೂ ಬಳಕೆಯಲ್ಲಿವೆ.

	ಶೀತ ಪ್ರದೇಶಗಳಲ್ಲಿ ಮನೆಗಳನ್ನು ಬಿಸಿನೀರು, ನೀರಿನ ಆವಿ ಇವುಗಳ ಉಪಯೋಗದಿಂದ ಬೆಚ್ಚಗಿರಿಸುವ ವ್ಯವಸ್ಥೆಯಿರುವಾಗ ಇದಕ್ಕೆ ಸಂಬಂಧಪಟ್ಟಂತೆಯೂ ಕೊಳಾಯಿಕೆಲಸದ ವ್ಯಾಪ್ತಿ ಉಂಟು.         (ಕೆ.ವಿ.ಎಸ್)
ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ